ಶ್ರೀಮಜ್ಜಗದ್ಗುರು ಶಂಕರಾಚಾರ್ಯ
ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶಿರಸಿ, ಉ.ಕ.
ಶ್ರೀ ಕಮಲಾಕರ ಭಟ್ಟ, ಕೊಡೇಗದ್ದೆ, ಬಲವಳ್ಳಿ, ಶಿರಸಿ, ಉತ್ತರ ಕನ್ನಡ
ಇವರ ವಿಷಯದಲ್ಲಿ ಮಾಡುವ ಶ್ರೀಮನ್ನಾರಾಯಣ ಸ್ಮರಣಪೂರ್ವಕ ಆಶೀರ್ವಾದಗಳು
‘ಸಿರಿಕಮಲ’ ಎಂಬ ಹೆಸರಿನ ಅಡಿಯಲ್ಲಿ ಕೃಷಿ ಆಧಾರಿತ ಎರೆಹುಳು ತಯಾರಿಕಾ ಕೈಗಾರಿಕೆಯನ್ನು ಸ್ಥಾಪಿಸಿ, ರಾಜ್ಯದ ವಿವಿಧ ಕಡೆಗಳಲ್ಲಿ ಶಾಖೆಗಳನ್ನು ತೆರೆದು, ಕಳೆದ ಅನೇಕ ವರ್ಷಗಳಿಂದ ಕೃಷಿ ಕ್ಷೇತ್ರಕ್ಕೆ ವಿಪ್ರವಾದ ಕೊಡುಗೆಯನ್ನು ನೀಡುತ್ತಿರುವ ವಿಷಯವು ವೇದ್ಯವಾಯಿತು, ಸಂತೋಷ.
ನಮ್ಮ ಆತ್ಮೀಯ ಶಿಷ್ಯರಾಗಿರುವ ಶ್ರೀ ಕಮಲಾಕರ ಭಟ್ಟರು ಅನೇಕ ಸಂಕಷ್ಟಗಳನ್ನು ಎದುರಿಸಿ, ತಮ್ಮ ಅನೇಕ ವರ್ಷಗಳ ಪರಿಶ್ರಮದಿ೦ದ ಸಾಧನೆಯ ಮಾರ್ಗದಲ್ಲಿ ಮುನ್ನಡೆಯುತ್ತಿರುವುದರ ಫಲವಾಗಿ ಇಂದು ‘ಸಿರಿಕಮಲ’ ಎಂಬ ಹೆಸರಿನಲ್ಲಿ ಆನೇಕ ಪ್ರಕಾರದ ಎರೆಹುಳು ಗೊಬ್ಬರವನ್ನು ಕೃಷಿಕ್ಷೇತ್ರಕ್ಕೆ ಪೂರೈಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಸಂಗತಿಯಾಗಿದೆ. ಯಾವುದೇ ದುಷ್ಪರಿಣಾಮಗಳಿಲ್ಲದ, ಅತ್ಯಂತ ಸತ್ಯಯುತವಾದ ಶುದ್ಧ ಗೊಬ್ಬರವನ್ನು ಕೃಷಿಕರಿಗೆ ಪೂರೈಸಬೇಕೆಂಬ ಅವರ ಕನಸು ಇಂದು ಸಾಕಾರಗೊಂಡು, ಅವರಲ್ಲಿ ಧನ್ಯತಾಭಾವವನ್ನು ಮೂಡಿಸುತ್ತಿರುವುದಲ್ಲದೇ ಕೃಷಿಭೂಮಿಯ ಫಲವತ್ತತೆಯನ್ನು ಉಳಿಸಿ- ಬೆಳೆಸಿಕೊಂಡು ಹೋಗಬೇಕೆಂಬ ಮಹತ್ವಾಕಾಂಕ್ಷೆಯುಳ್ಳ ನಮ್ಮ ನಾಡಿನ ಕೃಷಿಕರಿಗೂ ಇದರಿಂದ ಮಹದುಪಕಾರವಾದಂತಾಗಿದೆ. ಅನೇಕ ಪಾರಂಪರಿಕ ಕೃಷಿಕರು ‘ಸಿರಿಕಮಲ’ದ ಉತ್ಪನ್ನವನ್ನು ಕಳೆದ ಅನೇಕ ವರ್ಷಗಳಿಂದ ಉಪಯೋಗಿಸಿ, ಇದರ ಸತ್ಪರಿಣಾಮವನ್ನು ಕಾಣುತ್ತಿರುವುದು ಈ ಗೊಬ್ಬರಗಳ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.
ಶ್ರೀ ಕಮಲಾಕರ ಭಟ್ಟರ ಈ ಕೃಸೇವ ಇನ್ನಷ್ಟು ಸಮರ್ಪಕವಾಗಿ, ವ್ಯಾಪಕವಾಗಿ ಪಸರಿಸಲಿ, ತನ್ಮೂಲಕ ನಮ್ಮ ನಾಡಿನ ಬೆನ್ನೆಲುಬಾಗಿರುವ ಕೃಷಿಯು ಇನ್ನಷ್ಟು ಸತ್ಯಯುತವಾಗಲಿ, ‘ಸಿರಿಕಮಲ’ ಕೈಗಾರಿಕೆಯು ಅಭಿವೃದ್ಧಿ ಪಥದಲ್ಲಿ ಸಾಗುವ೦ತಾಗಲಿ, ಶ್ರೀ ಕಮಲಾಕರಭಟ್ಟರ ಈ ಪ್ರಯತ್ನ ಸಾರ್ಥಕಗೊಂಡು ಸಮಗ್ರ ಕೃಷಿಕರ ಜೀವನ ಉಜೀವನವಾಗಲೆ೦ದು ಆರಾಧ್ಯ ಶ್ರೀ ದೇವರಲ್ಲಿ ಪ್ರಾರ್ಥಿಸಿ ಆಶೀರ್ವದಿಸುತ್ತೇವೆ.
ಲೋಕಾಃ ಸಮಸ್ತಾ ಸುಖಿನೋ ಭವಂತು
ಶ್ರೀಮದ್ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು,
ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ
20-09-2018
ಶ್ರೀ ಗುರು ಚರಣ ಕಮಲಗಳಲ್ಲಿ ವಂದಿಸುತ್ತಾ...
ಶ್ರೀ ವೆಂಕಟರಮಣ ಭಟ್ಟ
(ತಂದೆ)
ಶ್ರೀಮತಿ ಯಶೋದ ಭಟ್ಟ
(ತಾಯಿ)
ಶ್ರೀ ಕೇಶವ ಹೆಗಡೆ, ಗಿಳಿಗುಂಡಿ (ಸೋದರ ಮಾವ)
ಶ್ರೀ ಶ್ರೀಧರ್ ಎನ್
(ಆಗಿನ) ಬ್ಯಾಂಕ್ ಮ್ಯಾನೇಜರ್
ಆತ್ಮೀಯರೇ,
ನನ್ನ ಉದ್ಯೋಗ ಜೀವನದ ಪ್ರಮುಖ ಭಾಗಗಳನ್ನು ತಮ್ಮೆದುರು ತೆರೆದಿಡುತ್ತಿರುವ ಈ ಸಂದರ್ಭದಲ್ಲಿ ಕೆಲವು ಮಹಾನುಭಾವರ ಸ್ಮರಣೆ ಮಾಡಿಕೊಳ್ಳಲು ಬಯಸುತ್ತೇನೆ. ನನಗೆ ವಿದ್ಯಾಬುದ್ದಿ ನೀಡಿ, ನನ್ನಲ್ಲಿ ಉತ್ತಮವಾದ ಸಂಸ್ಕಾರ ಮತ್ತು ಪ್ರಾಮಾಣಿಕತೆ ಬೆಳೆಸಿದ, ನನ್ನ ಉದ್ಯೋಗ ಪ್ರಾರಂಭಿಸುವಾಗ ಪ್ರಾರಂಭಿಕ ಹಂತದಲ್ಲಿ ನನಗೆ ಒಂದಿಷ್ಟು ಆರ್ಥಿಕ ಸಹಾಯ ಮಾಡಿ ನೆರವಾಗಿ ಪ್ರೋತ್ಸಾಹಿಸಿದ ನನ್ನ ತೀರ್ಥರೂಪರಾದ ವೆಂಕಟ್ರಮಣ ಭಟ್ ಹಾಗೂ ಸದಾ ನನ್ನ ಶ್ರೇಯಸ್ಸನ್ನು ಬಯಸಿ ತನ್ನ ಅನಾರೋಗ್ಯದಲ್ಲಿ ಸಹ ನನ್ನ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸುವ ನನ್ನ ತಾಯಿ ಯಶೋಧಾಭಟ್ರನ್ನು ಶಿರ ಸಾಷ್ಟಾಂಗ ನಮಿಸುತ್ತೇನೆ.
ಬ್ಯಾಂಕ್ನವರು ಭದ್ರತೆ ನೀಡಿದರೆ ಮಾತ್ರ ಸಾಲ ನೀಡುತ್ತಾರೆ. ಸಾಲ ಬೇಡದವರಿಗೆ ಭದ್ರತೆ ನೀಡುವ ಸಾಮಾರ್ಥ್ಯ ಇರುತ್ತದೆ. ಇದು ವಿಪರ್ಯಾಸ ಎಂದು ವಿಷಾದದಿಂದ ಯಾವುದೋ ಸಂದರ್ಭದಲ್ಲಿ ಮಾತನಾಡುತ್ತಿದ್ದಾಗ, ನನ್ನ ಜಮೀನು ಭದ್ರತೆಗೆ ಕೊಡುತ್ತೇನೆ. ಅಗುವುದಾದರೆ ಕೇಳು ಎಂದು ತಕ್ಷಣ ಪ್ರತಿಕ್ರಿಯಿಸಿದ್ದ ಬಹುಶಃ ಮನೆಯಲ್ಲಿ ಕೂಡ ಯಾರಿಗೂ ಹೇಳದೇ ತಮ್ಮ ಭಾಗಯತದ ಪ್ರಮುಖ ಭಾಗವನ್ನು ನನ್ನ ಸಾಲದ ಭದ್ರತೆಗೆ ನೀಡಿ ನನ್ನ ಇಂದಿನ ಉತ್ತಮ ಸ್ಥಿತಿಗೆ ಮೂಲ ಕಾರಣರಾದವರು ನನ್ನ ಸೋದರ ಮಾವ ಶ್ರೀ ಕೇಶವ ವೆಂಕಟರಮಣ ಹೆಗಡೆ ಗಳಗುಂಡಿ, ನನ್ನ ಕಷ್ಟದ ಸಂದರ್ಭದಲ್ಲಿ ಅಪದ್ಭಾಂದವನಂತೆ ನೆರವಾದ ಎಲೆ ಮರೆಯಕಾಯಿಯಂತೆ ಇರುವ ನಿಗರ್ವಿ ಸರಳಜೀವಿ ಮೇರು ವ್ಯಕ್ತಿತ್ವದ ಇವರಿಗೆ ನಮಿಸಲು ನನ್ನೆರಡು ಕೈಗಳು ಸಾಲದು.
ತುಂಬಾ ಅಲೆದಾಡಿಸಿ ಕೂಡ ಸಾಲ ನೀಡಲು ಬಹಳಷ್ಟು ಬ್ಯಾಂಕ್ಗಳು ನಿರಾಕರಿಸಿದಾಗ ಸಿರಸಿಯ ವರದಾ ಗ್ರಾಮೀಣ ಬ್ಯಾಂಕ್ನ (ಇಂದಿನ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ) ಮ್ಯಾನೇಜರ್ ಶ್ರೀಧರ್ ಎನ್. ನನ್ನ ಪ್ರಥಮ ಭೇಟಿಯಲ್ಲಿಯೇ ಅವರಿಗೆ ನನ್ನ ಪರಿಚಯ ಇಲ್ಲದಿದ್ದರೂ ಸಹ ನನಗೆ ಸಾಲ ನೀಡಲು ಸಿದ್ದರಾಗಿ ನನ್ನಲ್ಲಿ ಆಶ್ಚರ್ಯ, ಸಂತೋಷ ಉಂಟುಮಾಡಿದ್ದರು. ನನ್ನ ಪ್ರಾಮಾಣಿಕತೆ ಮತ್ತು ಸಾಮರ್ಥ್ಯ ಗುರುತಿಸಿ ಸಾಲ ನೀಡಿ ನನ್ನನ್ನು ಉತ್ತೇಜಿಸಿದ, ನನ್ನ ಇಂದಿನ ಉತ್ತಮ ಸ್ಥಿತಿಗೆ ಮೂಲ ಕಾರಣರಲ್ಲೊಬ್ಬರಾದ ವಿರಳರಲ್ಲಿ ವಿರಳರಾಗಿರುವ ಅವರಿಗೆ ನನ್ನ ಅನಂತ ನಮನಗಳು.
ಸಾಲ ತೆಗೆದುಕೊಳ್ಳುವಾಗ ನನಗುಂಟಾದ ತಾಂತ್ರಿಕ ಅಡಚಣೆ ನಿವಾರಣೆಗೆ ಸಹಾಯ ಮಾಡಿ ನೆರವಾದ ಸೋದರ ಮಾವ ಶ್ರೀ ಶಂಕರ ಹೆಗಡೆ ಗಿಳಗುಂಡಿ ಇವರನ್ನು ಸ್ಮರಿಸಿ ವಂದಿಸುತ್ತೇನೆ. ನನ್ನ ಅನಾರೋಗ್ಯದಲ್ಲಿ ಮತ್ತು ಕಷ್ಟದ ಸಂದರ್ಭಗಳಲ್ಲಿ ನನಗೆ ನೆರವಾದ ನನ್ನ ಸಹೋದರ ಸಹೋದರಿಯರನ್ನು, ಬಂಧು ವರ್ಗದವರನ್ನು ಈ ಸಂದರ್ಭದಲ್ಲಿ ಸ್ಮರಿಸಿ ವಂದಿಸುತ್ತೇನೆ. ತಮ್ಮ ಮೈ ಕೈಗಳಿಗೆ ಕೆಸರು ಅಂಟಿಸಿಕೊಂಡು ಕಷ್ಟಪಟ್ಟು ದುಡಿದು ನನ್ನ ಉದ್ಯೋಗದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ ಸಂಸ್ಥೆಯಲ್ಲಿ ದುಡಿಯುತ್ತಿರುವ ಮತ್ತು ಈ ಹಿಂದೆ ದುಡಿದ ಎಲ್ಲಾ ಕೆಲಸಗಾರರು, ನೌಕರರನ್ನು, ನನ್ನೊಂದಿಗೆ ಕೈಜೋಡಿಸಿದ ಎಲ್ಲಾ ಡೀಲರುಗಳನ್ನು, ಸೇವಾ ಸಹಕಾರಿ ಸಂಘಗಳ ಸಿಬ್ಬಂದಿಗಳನ್ನು, ಪದಾಧಿಕಾರಿಗಳನ್ನು ಸ್ಮರಿಸಿ ವಂದಿಸುತ್ತೇನೆ. ಕೈಗಾರಿಕೆಯ ಮೂಲ ಕಚ್ಚಾವಸ್ತು ಉತ್ತಮ ಸಗಣಿ ಪೂರೈಸುತ್ತಿರುವ ಶ್ರೀಯುತರುಗಳಾದ ಮಾರುತಿ, ಪಾಳಾದ ಹನುಮಂತ, ಮುದ್ದು ಮಾದಪ್ಪ, ಶಿವಲಿಂಗಗೌಡ ಹಾಗೂ ಈ ಹಿಂದೆ ಪೂರೈಸುತ್ತಿದ್ದ ಕಮಲಾಕರ ಮಂಜುಗುಣಿ, ಉತ್ತಮ ಕುರಿಗೊಬ್ಬರ ನೀಡುತ್ತಿರುವ ಶ್ರೀಯುತರುಗಳಾದ ಗುಡ್ಡಾಪುರದ ರಮೇಶ್, ಶ್ರೀಕಾಂತ, ರಂಗಾಪುರ ರಮೇಶ, ಕಲಗೋಡಿನ ಅಶೋಕ, ಹೊನ್ನಪ್ಪ, ಮುರಳಿ, ಇವರುಗಳನ್ನು ಹಾಗೂ ಸದಾ ನಮ್ಮೊಂದಿಗೆ ಕೈಜೋಡಿಸಿ ಸಹಕರಿಸಿದ ಜವಾಬ್ದಾರಿ ಬಾಡಿಗೆ ವಾಹನಗಳ ಮಾಲಿಕರಾದ ಶ್ರೀಯುತರುಗಳಾದ ಅಖಿಲೇಶ್ ನಾಯ್ಕ & ಸಂಗಡಿಗರು, ಈಶ್ವರನಾಯ್ಕ ಅಮೀನಳ್ಳಿ, ಚಂದ್ರು ಮಡಿವಾಳ ಸಂಪಖಂಡ, ಯಾದವ ದೊಡ್ಡಮನೆ, ರಾಮನಾಥ ಗೋಳಿ, ಈ ಹಿಂದೆ ಸಹಕರಿಸಿದ ಶ್ರೀಯುತ ಗುರುಗಳಾದ ಸುರೇಶ ಹೆಗಡೆ ಟೊಣ್ಣೆಮನೆ, ಸಿ.ಡಿ ಹೆಗಡೆ ಸಂಪಖಂಡ, ರವಿ ಅಮ್ಮಿನಳ್ಳಿ, ಸುರೇಶ್ ರೇವಣಕಟ್ಟಿ, ಇವರುಗಳನ್ನೆಲ್ಲಾ, ಮತ್ತು ಹಮಾಲರುಗಳನ್ನು ಸ್ಮರಿಸಿ ವಂದಿಸುತ್ತೇನೆ. ನಮ್ಮ ಮೇಲೆ ನಂಬಿಕೆ ವಿಶ್ವಾಸವಿಟ್ಟು ನಮ್ಮ ಗೊಬ್ಬರವನ್ನು ಪ್ರೀತಿ ವಿಶ್ವಾಸದಿಂದ ಖರೀದಿಸಿ ನಮ್ಮನ್ನು ಪ್ರೋತ್ಸಾಹಿಸಿ ಆಶೀರ್ವದಿಸುತ್ತಿರುವ ಎಲ್ಲಾ ರೈತ ಗ್ರಾಹಕರನ್ನು ಸ್ಮರಿಸಿ ವಂದಿಸುತ್ತೇನೆ. ಪ್ರತ್ಯಕ್ಷ ಅಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ತುಂಬುಹೃದಯದ ನಮನಗಳು, ಇವರೆಲ್ಲರಿಗೂ ಭಗವಂತ ಹೆಚ್ಚಿನ ಆಯುರಾರೋಗ್ಯ ನೆಮ್ಮದಿ ಸಂಪತ್ತು ಕರುಣಿಸಲೆಂದು ಪ್ರಾರ್ಥಿಸುತ್ತೇನೆ.
ಕಮಲಾಕರ ಭಟ್, ಕೊಡೆಗದ್ದೆ
ಸಿರಿಕಮಲ ಬಯೋಆರ್ಗ್ಯಾನಿಕ್ ಇಂಡಸ್ಟ್ರೀಸ್
ರೈತರಿಗಾಗಿಯೇ ರೈತರಿಂದಲೇ ಗ್ರಾಮೀಣ ಪ್ರದೇಶದಲ್ಲಿಯೇ ಹುಟ್ಟಿ ರೈತರಿಂದಲೇ ಘೋಷಿಸಲ್ಪಡುತ್ತಿರುವ ಕೃಷಿ ಅವಲಂಬಿತ ಕೈಗಾರಿಕೆ ಸ್ಥಾಪನೆ- 1999ನೇ ಇಸವಿ, ಉತ್ತರ ಕನ್ನಡ ಜಿಲ್ಲೆಯ ಸಿರಸಿ ತಾಲ್ಲೂಕಿನ ಜಾನ್ಮನೆ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬಲವಳ್ಳಿ ಗ್ರಾಮದ ಕೊಡೇಗದ್ದೆ ಊರಿನಲ್ಲಿ ಕಮಲಾಕರ ವೆಂಕಟ್ರಮಣ ಭಟ್ ಎಂಬ ರೈತ ಕುಟುಂಬದ ವ್ಯಕ್ತಿಯಿಂದ ಖಾದಿ ಮಂಡಳಿಯ ಯೋಜನೆಯ ಅಡಿಯಲ್ಲಿ ಈ ಕೃಷಿ ಆಧಾರಿತ ಎರೆಹುಳು ತಯಾರಿಕಾ ಕೈಗಾರಿಕೆ ಸ್ಥಾಪನೆಗೊಂಡಿತು. ಸ್ವತಃ ರೈತ ಕುಟುಂಬದಿಂದ ಬಂದ ಈತ ರೈತರ ಅಗತ್ಯಗಳನ್ನು ಮತ್ತು ಅವರ ಸಮಸ್ಯೆಗಳ ಅರಿವನ್ನು ಹೊಂದಿದ್ದರಿಂದ ರೈತರ ಅಗತ್ಯಕ್ಕನುಗುಣವಾಗಿ ಸಾವಯವ ಗೊಬ್ಬರವನ್ನು ತಯಾರಿಸಲು ಯಶಸ್ವಿಯಾಗಿದ್ದು ಸತ್ಯ. ಇಂದು ಈ ಕೈಗಾರಿಕೆಯು ಉತ್ತರ ಕನ್ನಡ, ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಗಳಲ್ಲಿರುವ ಅತಿ ದೊಡ್ಡ ಎರೆಹುಳು ತಯಾರಿಕಾ ಕೈಗಾರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
* ಕೈಗಾರಿಕೆಯು ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡು 4 ವರ್ಷಗಳ ಹಿಂದೆ ಮೈಸೂರು ಜಿಲ್ಲೆಯಲ್ಲಿ ಸಹ ಒಂದು ಶಾಖೆಯನ್ನು ಪ್ರಾರಂಭಿಸಿದೆ. ಅಲ್ಲದೇ ಸಿರಸಿ ತಾಲ್ಲೂಕಿನ ಹೆಗಡೆಕಟ್ಟಾ ರೋಡಿನ ಹೂತನ ಜಾನ್ಮನೆಯಲ್ಲಿಯೂ ಸಹ ಕಳೆದ ವರ್ಷ (2017 ಮೇ) ಒಂದು ಉಪಶಾಖೆಯನ್ನು ಸ್ಥಾಪಿಸಿದ್ದು ಕೈಗಾರಿಕೆಯ ಅಭಿವೃದ್ಧಿಗೆ ಸಾಕ್ಷಿಯಾಗಿದೆ.