ಸಂಪೂರ್ಣ ಸಾವಯವ ಏಕೆ ?
60ರ ದಶಕದಲ್ಲಿ ಭಾರತಕ್ಕೆ ಬಂದ ಹಸಿರು ಕ್ರಾಂತಿಯು ನಮ್ಮ ದೇಸೀ ಮಣ್ಣಿಗೆ ಪೂರಕವಾಗಿರಲಿಲ್ಲ. ಅದು ಸಮೃದ್ಧ ಆಹಾರವನ್ನು ಉತ್ಪಾದಿಸುತ್ತಾ ಯೂನಿಯನ್ಕಾರ್ಬೈಡ್ನಂತಹ ದೈತ್ಯ ರಾಕ್ಷರಸನ್ನೇ ಕೃಷಿಗೆ ಬರಲು ಅನುವು ಮಾಡಿಕೊಟ್ಟಿತ್ತು. ಜಾಗತೀಕರಣದ ಸಂದರ್ಭದಲ್ಲಂತೂ ಕಾರ್ಗಿಲ್ಮಾನ್ಸಾಂಟೋ ಕಂಪನಿಗಳು ಕೃಷಿಯನ್ನು ಲೂಟಿ ಮಾಡುತ್ತಾ ರೈತರನ್ನು ಜಾಗತೀಕರಣದ ವಿಶಾಲ ಮಾರುಕಟ್ಟೆಯಲ್ಲಿ ಸಿಕ್ಕಿಸಿ ಅವರು ಈ ವಿಷ ವರ್ತುಲದಿಂದ ಹೊರಬರಲು ಅಸಾಧ್ಯವಾದ ಸ್ಥಿತಿನಿರ್ಮಿಸಿದರು ಹೊಸ ತಂತ್ರಜ್ಞಾನ, ಏಕ ಬೆಳೆ ಪದ್ಧತಿಯು ನಮ್ಮ ದೇಸೀ ಬೀಜ ಸಂಸ್ಕೃತಿಯನ್ನು, ದೇಸೀ ತಳಿ ಸಂಸ್ಕೃತಿಯನ್ನು, ದೇಸೀ ಕೃಷಿ ಸಂಸ್ಕೃತಿಯನ್ನು, ಪೌಷ್ಟಿಕ ಮೇಲ್ಮಣ್ಣನ್ನು, ದೇಸಿ ಆಹಾರ ಸಂಸ್ಕೃತಿಯನ್ನು ನಾಶಮಾಡಿತ್ತು. ಇದಕ್ಕೆ ಪೂರಕವಾಗಿಯೇ ದೇಶದ ರಾಜಕೀಯ ವ್ಯವಸ್ಥೆ ಕೂಡ ಸ್ಪಂದಿಸಿತ್ತು.
ಕೃಷಿ ವಿಶ್ವವಿದ್ಯಾಲಯಗಳು ಕೃಷಿ ವಿಜ್ಞಾನಿಗಳು, ಇಲಾಖೆಗಳು, ರಾಸಾಯನಿಕ ವಿಷ ಕಾರ್ಖಾನೆಗಳು, ಕೃತಕ ಬೀಜ ಕಂಪನಿಗಳು ಸೇರಿದ ಲಾಭಬಡಕರು ಸಂಪದ್ಭರಿತವಾದ ನಮ್ಮ ಕೃಷಿ ಭೂಮಿಯಲ್ಲಿ ತರಾವರಿ ಪ್ರಯೋಗಗಳನ್ನು ಮಾಡುತ್ತಾ ರೈತರನ್ನು ವಿನಾಶದತ್ತ ಕೊಂಡೊಯ್ದರು. ಶತಶತಮಾನಗಳಿಂದ ರೈತರು ಗಳಿಸಿದ್ದ ಅರಿವು ಮತ್ತು ವಿವೇಕ ಎಲ್ಲವೂ ಈ ಪ್ರವಾಹದಲ್ಲಿ ಕೊಚ್ಚಿಹೋದವು, ಹೊರಗಿನ ಮಾರುಕಟ್ಟೆಗೆ ಬೇಕಾದ ದಾಳಿ ಉತ್ಪಾದಕರಾಗಿ ರೈತರು ಬದಲಾದರು.ಭಾರತದಲ್ಲಿ ಇಂದು ಪ್ರತೀ 30 ನಿಮಿಷಗಳಿಗೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ವಿಚಿತ್ರ ಮತ್ತು ಆಶ್ಚರ್ಯವೆಂದರೆ ಸಹಜಕೃಷಿ ಮತ್ತು ಸಾವಯವ ಕೃಷಿ ಅಳವಡಿಸಿಕೊಂಡ ಯಾವ ರೈತರೂ ಆತ್ಮಹತ್ಯೆ ಮಾಡಿಕೊಂಡ ವರದಿ ಇಲ್ಲ. ಇಂತಹ ಕೃಷಿಗೆ ಕಂಪನಿಯ ರಾಸಾಯನಿಕ ಗೊಬ್ಬರಗಳು ಬೇಕಾಗಿಲ್ಲ. ಕಂಪನಿ ಬೀಜಗಳು ಬೇಕಾಗಿಲ್ಲ, ಕಂಪನಿ ಕೀಟನಾಶಕಗಳು ಬೇಕಾಗಿಲ್ಲ. ಇದು ರೈತರ ದೀರ್ಘಾವಧಿಯ ಸ್ವಾವಲಂಭೀ ಜೀವನಕ್ಕೆ ಅನುವು ಮಾಡಿಕೊಡುತ್ತದೆ.
ರಸಗೊಬ್ಬರ ಹೈಬ್ರಿಡ್ ಬೀಜ, ಕೀಟನಾಶಕ, ಕ್ರಿಮಿನಾಶಕ, ಕಳೆನಾಶಕ ವಿಷಗಳನ್ನೇ ಭೂಮಿತಾಯಿಗೆ ಉಣಿಸಿದ ರೈತನಿಗೆ ಸಿಕ್ಕಿದ್ದು ಖಾಯಿಲೆಗಳು, ಶ್ರಮವಿಲ್ಲದೇ ಖುರ್ಚಿಯಲ್ಲಿ ಕುಳಿತುಕೊಳ್ಳುವವರಿಗೆ ಮಾತ್ರ ಬರುತ್ತಿದ್ದ ಸಕ್ಕರೆ ಖಾಯಿಲೆಗಳು ಈಗ ರೈತರನ್ನೂ ವ್ಯಾಪಿಸಿದೆ, ಬಿಪಿ, ಕೊಲೆಸ್ಟ್ರಾಲ್, ಕಿಡ್ನಿ ಸಮಸ್ಯೆ, ರಕ್ತ ಹೀನತೆ, ಹೃದಯ ಕಾಯಿಲೆಗಳು ಕ್ಯಾನ್ಸರ್ ಹೀಗೆ ಅನೇಕ ರೋಗಗಳು ರೈತರಲ್ಲೂ ಬೃಹತ್ ಪ್ರಮಾಣದಲ್ಲಿ ಕಾಣಿಸಿಕೊಂಡಿದೆ. ಭೂತಾಯಿಗೆ ಖಾಯಿಲೆ ಅಂಟಿಸಿದರೆ ಆಕೆಯ ಮಕ್ಕಳು ಅದರಿಂದ ಮುಕ್ತರಾಗಲು ಸಾಧ್ಯವೇ?
ರೈತರ ರಕ್ಷಕರಾಗುವತ್ತ ದಾಪುಗಾಲಿಡುತ್ತಿರುವ, ಆದರೆ ಅದೇ ರೈತರ ಸ್ವಾಸ್ಥ್ಯ ಮತ್ತು ಭೂಮಿತಾಯಿಯ ನಿಜವಾದ ರಕ್ಷಕರೂ ಆಗಬೇಕಾಗಿದ್ದ ಟಿ.ಎಸ್.ಎಸ್. ಮುಂತಾದ ಸಹಕಾರಿ ಸಂಘಗಳೇ ಇಂದು ಕೃಷಿ ತಜ್ಞರೆಂದು ನಾಮಫಲಕ ಹಾಕಿಕೊಂಡವರ ಮೂಲಕ ಸಮನ್ವಯ ಕೃಷಿಯ ಹೆಸರಿನಲ್ಲಿ ಸಾವಯವ ರೈತರನ್ನೂ ಸಹ ರಾಸಾಯನಿಕ ಕೃಷಿಯತ್ತ ದೂಡುತ್ತಿರುವದು ದುರಂತ. ಸಂಪೂರ್ಣ ಸಾವಯವದಲ್ಲಿಯೇ ಬೇಕಾದಷ್ಟು ರೈತರು ಗರಿಷ್ಟ ಇಳುವರಿ ಪಡೆಯುತ್ತಿದ್ದರೂ ಸಹ ಅವರನ್ನು ಪರಿಗಣಿಸುವ ಗೋಜಿಗೇ ಹೋಗದೇ ಮೊಲಕ್ಕೆ ಮೂರೇ ಕಾಲು ಎಂಬಂತೆ ಇವರು ರಾಸಾಯನಿಕವನ್ನು ಪ್ರೋತ್ಸಾಹಿಸುತ್ತಿರುವುದು ವಿಪರ್ಯಾಸ ಮತ್ತು ಅಪಾಯಕಾರಿ ಬೆಳವಣಿಗೆಯಾಗಿದೆ. ಒಮ್ಮೆ ರಾಸಾಯನಿಕದತ್ತ ವಾಲಿದ ರೈತ ಅದನ್ನು ಸಮರ್ಥಿಸಲು ತನಗರಿವಿಲ್ಲದೇ ಇತರರನ್ನು ಸೆಳೆಯುತ್ತಾನೆ. ರೈತರಿಗೆ ಕೃಷಿ ಸಲಹೆ ನೀಡುವ ಹಲವು ಕೃಷಿ ವಿಜ್ಞಾನಿಗಳು ಕೃಷಿ ವಿಶ್ವ ವಿದ್ಯಾಲಯಗಳು, ಇಲಾಖೆಗಳೇ ರಾಸಾಯನಿಕ ಕೃಷಿಗೆ ಕಾರಣವಾಗಿವೆ ಎನ್ನುವುದು ವಾಸ್ತವ. ಮುಗ್ಧ ರೈತ ಇವರ ಸಲಹೆಗಳನ್ನೇ ನಂಬುತ್ತಾನೆ. ವಿಷ ಸ್ವಲ್ಪವಾಗಲೀ ಹೆಚ್ಚೇ ಇರಲಿ ಅದು ವಿಷವೇ ಅಲ್ಲವೇ? ಭೂತಾಯಿ ನಿರೋಗಿಯಾಗಿದ್ದರೆ ಮಾತ್ರ ಎಲ್ಲರೂ ಆರೋಗ್ಯವಾಗಿರಲು ಸಾಧ್ಯ ಎಂಬ ಸಾರ್ವತ್ರಿಕ ಸತ್ಯವನ್ನು ಇವರು ಮರೆತಿದ್ದಾರೆ.
ರಾಸಾಯನಿಕಕ್ಕೆ ಪರ್ಯಾಯವಾಗಬೇಕಿದ್ದ ಸಾವಯವಗೊಬ್ಬರ ತಯಾರಿಸುವ ಹಲವು ಕಂಪನಿಗಳು ಸಹ ತಮ್ಮ ಲಾಭಕ್ಕಾಗಿ ಚೀಲ ತುಂಬಿಸಲು ಯಾವುದೇ ಒಂದು ಕಳಪೆ ವಸ್ತು ಹಾಕಿ ಅದಕ್ಕೆ ರಾಸಾಯನಿಕ ಗೊಬ್ಬರ ಸೇರಿಸಿ ತಾವೇನು ಕಮ್ಮಿ ಎಂದು ಭೂಮಿಯನ್ನು ವಿಷಯುಕ್ತ ಮಾಡುವ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ರೈತರನ್ನು ಮೊಸಗೊಳಿಸಿ ತಾವು ಆದಾಯ ಗಳಿಸುತ್ತಿದ್ದಾರೆ.
ಬೆಳೆ ಬೆಳೆಯುವುದು ಆರಿಂಚು ಮಣ್ಣಿನಲ್ಲಿ, ಎರೆ ಹುಳು ಸೇರಿದಂತೆ ಕೋಟ್ಯಂತರ ರೈತಪರ ಸೂಕ್ಷ್ಮ ಜೀವಿಗಳು ವಾಸಿಸುವ ಪ್ರಪಂಚ ಅದು. ಕೃಷಿಯ ಯಶಸ್ಸು ನಿಂತಿರುವುದು ಮೇಲ್ಮಣ್ಣಿನ ಪೌಷ್ಟಿಕತೆ ಮತ್ತು ಆರೋಗ್ಯದ ಮೇಲೆ, ಮಣ್ಣಿನೊಳಗೆ ಮೇಲೆ ಕೆಳಗೆ ಸಂಚರಿಸಿ ಉಳಿಮೆ ಮಾಡುವ ಈ ಸೂಕ್ಷ್ಮ ಜೀವಿಗಳು ಮಣ್ಣಿಗೆ ಬೇಕಾದ ರಂಜಕ, ಪೋಟಾಷ್, ನೈಟ್ರೇಟ್, ಸುಣ್ಣ ಮುಂತಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಎರೆಹುಳು ಸೃಷ್ಟಿಸುವ ರಂದ್ರಗಳ ಮೂಲಕ ಇವು ಭೂಮಿಯಲ್ಲಿ ಸೇರಿ ಮಣ್ಣನ್ನು ಸಮೃದ್ಧಗೊಳಿಸುತ್ತದೆ. ಹೊದಿಕೆ ಮತ್ತು ರಂಧ್ರಗಳಿರುವುದರಿಂದ ಮಳೆಯಾದಾಗ ಈ ಮಣ್ಣು ಸವಕಳಿಯಾಗದೇ ರಂಧ್ರಗಳ ಮೂಲಕ ನೀರು ಹರಿದು ಅಂತರ್ಜಲವನ್ನು ಸೇರಿಕೊಳ್ಳುತ್ತದೆ. ಮೇಲ್ಮಣ್ಣನ್ನು ಉಳಿಸಿ ಬೆಳೆಸುವುದೇ ಕೃಷಿಯ ಜೀವಾಳ ಸಹಜ ಕೃಷಿ ಮತ್ತು ಸಾವಯವ ಕೃಷಿಯಿಂದ ಇದು ಸಾಧ್ಯ.
ಸಹಜ ಕೃಷಿ ಮತ್ತು ಸಾವಯವ ಕೃಷಿಯಿಂದ ಭೂಮಿತಾಯಿಯ ಒಡಲನ್ನು ವಿಷಮುಕ್ತಗೊಳಿಸಬಹುದು. ಇಂದಿನ ಮತ್ತು ಮುಂದಿನ ಪೀಳಿಗೆಯ ಜನರನ್ನು ರಕ್ಷಿಸಬೇಕೆಂದರೆ ಸಾವಯವ ಕೃಷಿ ಏಕಮಾತ್ರ ಪರಿಹಾರ. ಇದು ಇಂದಿನ ತುರ್ತು ಅಗತ್ಯ.
ಕಮಲಾಕರ ಭಟ್, ಕೊಡೆಗದ್ದೆ